ಕನ್ಯಾಮೇರಿ : ಯಹೂದ್ಯ ಜನಾಂಗದವಳಾದ ಈಕೆ ಪ್ಯಾಲೆಸ್ಟೈನಿನ ಸಂತ ಜೋಸೆಫನ ಧರ್ಮಪತ್ನಿ. ಹೀಬ್ರೂ ಭಾಷೆಯಲ್ಲಿ ಮೇರಿ (ಮಿರಿಯಮ್) ಎಂದರೆ ಸಭ್ಯಸ್ತ್ರೀ ಎಂದರ್ಥ. ಯಹೂದ್ಯ ಜನಾಂಗದಲ್ಲಿ ಸುಪ್ರಸಿದ್ಧ ರಾಜನಾದ ದಾವೀದನ ವಂಶದವಳಾದ ಈಕೆ ಹುಟ್ಟಿದ್ದು ನಜಾರತ್ (ನಜರೇತು) ಎಂಬ ಹಳ್ಳಿಯಲ್ಲಿ ತಂದೆ ಜೋರೆಂ ಎಂದೂ ತಾಯಿ ಅನ್ನಾ ಎಂದೂ ಪರಂಪರೆ ಹೇಳುತ್ತದೆ. ಜೀವಮಾನವಿಡೀ ಬ್ರಹ್ಮಚರ್ಯವನ್ನು ಪಾಲಿಸುವ ವ್ರತವಿಟ್ಟುಕೊಂಡಿದ್ದ ಈಕೆ ದೇವರ ಏಕಮಾತ್ರಪುತ್ರ ಭಗವಾನ್ ಯೇಸೂಕ್ರಿಸ್ತನ ಮಾತೆಯಾಗುವ ಅತ್ಯುನ್ನತ ಹಾಗೂ ವಿಸ್ಮಯಕಾರಕ ಗೌರಕ್ಕೆ ಪಾತ್ರಳಾದಳು. ದೇವರಿಂದ ಸೃಷ್ಟಿಸಲ್ಪಟ್ಟ ಎಲ್ಲ ಮಾನವರಲ್ಲಿ ಉತ್ತಮಳಾದ ಈಕೆ ಜೀವಿತಕಾಲವೆಲ್ಲ ಸರ್ವರಿಗೂ ಅಂಟಿಬರುವ ಆದಿಪಾಪದಿಂದ ವಿಮೋಚಿತಳಾಗಿದ್ದಳು. ಇದೂ ಅಲ್ಲದೆ ಮಾತೃವರ್ಗಕ್ಕೇ ಆದರ್ಶಪ್ರಾಯ ವಾದ ಸಜ್ಜೀವನವನ್ನು ನಡೆಸಿ, ಗತಿಸಿದೊಡನೆ ಇತರರಂತೆ ಕೊಳೆಯದೆ. ದೈವಕೃಪೆಯಿಂದ ಸಶರೀರೆಯಾಗಿ ಸ್ವರ್ಗಕ್ಕೆತ್ತಲ್ಪಟ್ಟಳೆಂದು ಕೆಥೊಲಿಕರು ನಂಬುತ್ತಾರೆ.

ಕ್ರೈಸ್ತ ಮಂಡಲಿಯಲ್ಲಿ ಮೇರಿಗೆ ಗೌರವದ ಸ್ಥಾನವಿದೆ. ಯೇಸುವಿನ ಲೋಕಹಿತ ಕಾರ್ಯದಲ್ಲಿ ಇವಳೂ ಭಾಗಿಯಾಗಿ ಸಲ್ಲಿಸಿದ ಸೇವೆಯ ಫಲವಾಗಿ ಕೆಥೊಲಿಕರು ಇವಳಲ್ಲಿ ಅನುಪಮ ಭಕ್ತಿಯನ್ನು ತೋರಿಸುತ್ತಾರೆ. ಯೇಸುವಿನ ತರುವಾಯ, ಇವಳಿಗೆ ಇನ್ನೂ ಹೆಚ್ಚಿನ ಗೌರವ ಸಲ್ಲುವಂತಾಯಿತು. ಆಗಾಗ್ಗೆ, ಕೆಲವು ಸ್ಥಳಗಳಲ್ಲಿ ಈಕೆ ಈಗಲೂ ಕಾಣಿಸಿಕೊಂಡು, ಸತ್ಯದ ದಾರಿಯಲ್ಲಿ ನಡೆಯುವಂತೆ ಪ್ರೋತ್ಸಾಹಿಸುತ್ತಿರುವಳೆಂದು ಜನ ನಂಬಿದ್ದಾರೆ.	(ಎ.ಪಿ.ಆರ್.; ಡಿ.ಎಸ್.ಓ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ